ಪೆನ್ ಡ್ರೈವ್ ನಲ್ಲಿದ್ದ ವೀಡಿಯೋಗಳೆಲ್ಲಾ ಒರಿಜಿನಲ್:  ಎಫ್.ಎಸ್.ಎಲ್ ವರದಿಯಿಂದ ದೃಢ!

ಪೆನ್ ಡ್ರೈವ್ ನಲ್ಲಿದ್ದ ವೀಡಿಯೋಗಳೆಲ್ಲಾ ಒರಿಜಿನಲ್: ಎಫ್.ಎಸ್.ಎಲ್ ವರದಿಯಿಂದ ದೃಢ!

2024-08-01 11:38:57

ದೇಶಾದ್ಯಂತ ಭಾರೀ ವಿವಾದಕ್ಕೀಡಾಗಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ  ಗುರಿಯಾಗಿದ್ದ ಪೆನ್ ಡ್ರೈವ್ ನಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆಯ ವೀಡಿಯೊಗಳು ಅಸಲಿ ಎಂದು ಎಸ್ ಎಫ್ ಎಲ್ ವರದಿ ದೃಢಪಡಿಸಿದೆ.
ಇದರಿಂದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಸಂಕಷ್ಟ ಹೆಚ್ಚಾಗಿದೆ.

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವೀಡಿಯೊಗಳು ಲೋಕಸಭಾ ಚುನಾವಣೆಗೂ ಮುನ್ನ ಹಾಸನ ಜಿಲ್ಲೆಯ ಬೀದಿ ಬೀದಿಗಳಲ್ಲಿ ಸಿಕ್ಕಿದ್ದವು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದವು.

ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡಿದ್ದ ಎಸ್ ಐಟಿ ಪೊಲೀಸರು ಪೆನ್ ಡ್ರೈವ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಪೆನ್ ಡ್ರೈವ್ ನಲ್ಲಿನ ಎಲ್ಲಾ ವೀಡಿಯೊಗಳು ನೈಜವಾಗಿದ್ದು, ಯಾವುದೇ ರೀತಿಯಲ್ಲಿ ತಿರುಚಿಲ್ಲ ಎಂದು ಸ್ಪಷ್ಟಪಡಿಸಿದೆ.

ಪೆನ್ ಡ್ರೈವ್ ನಲ್ಲಿರುವ ವೀಡಿಯೊಗಳು ನೈಜ ಎಂಬುದು ದೃಢಪಟ್ಟಿದ್ದರೂ ವೀಡಿಯೊದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣನೇ ಅಥವಾ ಬೇರೆಯವನೇ ಎಂಬ ಬಗ್ಗೆ ವಿಧಿ ವಿಜ್ಞಾನ ಪರೀಕ್ಷೆ ನಡೆಯಬೇಕಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿರುವ ವೀಡಿಯೊದಲ್ಲಿ ಪ್ರಜ್ವಲ್ ರೇವಣ್ಣ ಅವರ ಮುಖವನ್ನು ಮರೆ ಮಾಚಲಾಗಿದೆ. ಆದ್ದರಿಂದ ವೀಡಿಯೊದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣನೇ ಅಥವಾ ಬೇರೋಬ್ಬನೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಎಸ್ ಐಟಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ವರ್ಗಾವಣೆಯಾದ ಪೊಲೀಸರನ್ನು ತನಿಖೆ ಮುಂದುವರಿಸಲು ಮರು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿದೆ.

author single

L Ramprasad

Managing Director

comments

No Reviews