ಮನೆ ಊಟಕ್ಕೆ ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದ ದರ್ಶನ್

ಮನೆ ಊಟಕ್ಕೆ ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದ ದರ್ಶನ್

2024-07-30 10:10:30

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್​ ತೂಗುದೀಪ್ ಅವರು ಮನೆ ಊಟಕ್ಕಾಗಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಈ ಹಿಂದೆ ಮನೆ ಊಟ ಹಾಗೂ ಹಾಸಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯು ಹೈಕೋರ್ಟ್​ನಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಂದು ಅಲ್ಲಿ ವಜಾ ಆಗಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ವಕೀಲರು ದರ್ಶನ್​ರ ಅರ್ಜಿಯನ್ನು ಹಿಂಪಡೆದಿದ್ದರು. ಈಗ ದರ್ಶನ್ ಮತ್ತೊಮ್ಮೆ ಮನೆ ಊಟಕ್ಕಾಗಿ ಮನವಿ ಸಲ್ಲಿಸಿದ್ದು, ಈ ಬಾರಿ ಜೈಲಾಧಿಕಾರಿಗಳಿಗೆ ಮತ್ತು ಜೈಲಿನ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜೈಲು ವೈದ್ಯಾಧಿಕಾರಿ, ಕಾರಾಗೃಹ ಎಡಿಜಿಪಿಗೆ ಪತ್ರ ಬರೆದಿರುವ ನಟ ದರ್ಶನ್, ತಮಗೆ ಮನೆ ಊಟ ತರಿಸಿಕೊಳ್ಳಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ‘22/06/24 ರಂದು ಕೇಂದ್ರ ಕಾರಾಗೃಕಹಕ್ಕೆ ಬಂದಿದ್ದು ನಾನು ದಿನನಿತ್ಯ ನನ್ನ ಮನೆಯಲ್ಲಿದ್ದಾಗ ವ್ಯಾಯಾಮ ಮಾಡುತ್ತಿದ್ದೆ, ಅದರ ಜೊತೆ ಪೌಷ್ಟಿಕ (ಪ್ರೋಟಿನ್ ) ಆಹಾರ ಸೇವಿಸುತ್ತಿದ್ದೆ ಮತ್ತು ದಿನನಿತ್ಯ ಪೌಷ್ಟಿಕ ಆಹಾರ ತಿನ್ನುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ನನಗೆ ಬೇಕಾದ ಆಹಾರ ಕೊರತೆ ಇದ್ದು ನನ್ನ ದೇಹದ ತೂಕದಲ್ಲಿ ಸುಮಾರು 10 ಕೆ.ಜಿ ಯಷ್ಟು ಇಳಿದಿದ್ದೆ ಆದ ಕಾರಣ ದಯಮಾಡಿ ನನಗೆ ಮನೆ ಊಟದ ವ್ಯವಸ್ಥೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ನಟ ದರ್ಶನ್. ಜೈಲು ವೈದ್ಯಾಧಿಕಾರಿಗಳು ಜಾಗೂ ಜೈಲು ಮಹಾ ನಿರ್ದೇಶಕರನ್ನು ಉದ್ದೇಶಿಸಿ ಈ ಪತ್ರವನ್ನು ಬರೆಯಲಾಗಿದೆ.

ಕಳೆದ ಬಾರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದರಿಂದಲೇ ಈಗ ಹೊಸ ಅರ್ಜಿ ಸಲ್ಲಿಸಲೆಂದು ವಕೀಲರ ಸಲಹೆ ಪಡೆದು ಈ ಬಾರಿ ದರ್ಶನ್ ಮೊದಲಿಗೆ ಜೈಲು ಅಧಿಕಾರಿಗಳು ಹಾಗೂ ಜೈಲು ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಬಾರಿ ಆರೋಗ್ಯ ಸಮಸ್ಯೆಯ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯನ್ನು ಮುಖ್ಯ ವಿಷಯವನ್ನಾಗಿಸಿದ್ದಾರೆ. ಕಳೆದ ರಿಟ್ ಅರ್ಜಿಯಲ್ಲಿ ದರ್ಶನ್​ರ ಆರೋಗ್ಯ ಸಮಸ್ಯೆ ಬಗ್ಗೆ ಮಾತ್ರವೇ ಉಲ್ಲೇಖವಿತ್ತು.

ದರ್ಶನ್, ಜೈಲು ಸೇರಿದಾಗಿನಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೊರಗೆ ಪೌಷ್ಟಿಕಾಂಶಯುಕ್ತ ಭೂರಿ ಭೋಜನ ಮಾಡುತ್ತಿದ್ದ ನಟ ದರ್ಶನ್ ಜೈಲಿನಲ್ಲಿ ಸಾಧಾರಣ ಊಟವನ್ನಷ್ಟೆ ಮಾಡುತ್ತಿದ್ದಾರೆ. ಹೊರಗೆ ಜಿಮ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಊಟ ಮಾಡಿಕೊಂಡಿದ್ದ ದರ್ಶನ್, ಜೈಲು ಸೇರಿದ ಬಳಿಕ ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದಾರೆ. ಜೈಲಿನ ಊಟಕ್ಕೆ ಹೊಂದಿಕೊಳ್ಳಲಾಗದೆ ವಾಂತಿ-ಭೇದಿ ಸಮಸ್ಯೆಯನ್ನೂ ಎದುರಿಸಿದರು. ಒಮ್ಮೆ ಜ್ವರವೂ ಸಹ ದರ್ಶನ್ ಅನ್ನು ಕಾಡಿತ್ತು. ಜೈಲಿಗೆ ಹೋಗುವ ಮುನ್ನ ಕೈ ಶಸ್ತ್ರ ಚಿಕಿತ್ಸೆಗೆ ದರ್ಶನ್ ಒಳಗಾಗಿದ್ದರು. ಜೈಲಿನಲ್ಲಿ ಮಲಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮತ್ತೆ ಕೈ ನೋವು ಸಹ ದರ್ಶನ್​ಗೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

author single

L Ramprasad

Managing Director

comments

No Reviews