ನಕಲಿ ಅಂಕಪಟ್ಟಿ ಸಲ್ಲಿಸಿ ಹುದ್ದೆ ಗಿಟ್ಟಿಸಿದ್ದ ಜಲಸಂಪನ್ಮೂಲ ಇಲಾಖೆಯ 48 ಮಂದಿ ಅರೆಸ್ಟ್!
2024-08-31 09:23:26
ಕರ್ನಾಟಕ : ಜಲಸಂಪನ್ಮೂಲ ಇಲಾಖೆಯ 182 ಹುದ್ದೆಗಳ ನೇಮಕಾತಿಯಲ್ಲಿ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಹುದ್ದೆ ಗಿಟ್ಟಿಸಲು ಯತ್ನ.
• ಅವ್ಯವಹಾರ ಸಂಬಂಧ ಮೂವರು ಸರ್ಕಾರಿ ನೌಕರರು, 37 ಅಭ್ಯರ್ಥಿಗಳು ಹಾಗೂ 8 ಮಧ್ಯವರ್ತಿಗಳು ಸೇರಿ 48 ಮಂದಿಯನ್ನು ಬಂಧನ
• .ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನಕಲಿ ದಾಖಲಾತಿ ಸಲ್ಲಿಸಿ ನೌಕರಿ ಗಿಟ್ಟಿಸಿಕೊಳ್ಳಲು ಹಲವರು ಯತ್ನ.
• 2022ರ ಅಕ್ಟೋಬರ್ನಲ್ಲಿ ಜಲಸಂಪನ್ಮೂಲ ಇಲಾಖೆಯಿಂದ 182 ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು.
• ದ್ವಿತೀಯ ಪಿಯುಸಿ, ಸಿಬಿಎಸ್ಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು.
• ಯಾವುದೇ ಲಿಖಿತ ಪರೀಕ್ಷೆ ಇರಲಿಲ್ಲ. ನಕಲಿ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಹುದ್ದೆ ಪಡೆದುಕೊಳ್ಳಲು ಬಂಧಿತರು ಪ್ರಯತ್ನಿಸಿದ್ದರೆಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.
• ಬಂಧಿತರು?: ಕಲಬುರಗಿ ಜಿಲ್ಲೆಯ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಆನಂದ್, ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಜೋಗ್ ಫಾಲ್ಸ್ ಕಚೇರಿಯ ಎಫ್ಡಿಎ ಕೃಷ್ಣ ಗುರುನಾಥ್ ರಾಥೋಡ್ ಮತ್ತು ಜಲಸಂಪನ್ಮೂಲ ಇಲಾಖೆ (ಹಾಸನ) ಎಫ್ಡಿಎ ಪ್ರದೀಪ್ ಹಾಗೂ ಏಜೆಂಟ್ಗಳಾದ ಹಾಸನದ ಟಿ.ರವಿ, ಮಳವಳ್ಳಿಯ ಪ್ರದೀಪ್,ಜೇವರ್ಗಿಯ ಎನ್. ನಿಂಗಪ್ಪ, ವಿಜಯಪುರದ ಸಿಂದಗಿ ನಿವಾಸಿ ಮಲ್ಲಿಕಾರ್ಜುನ್ ಸಂಪೂರ್, ಕಲಬುರಗಿಯ ಮುಸ್ತಫಾ ಮತ್ತು 37 ಅಭ್ಯರ್ಥಿಗಳು ಸೇರಿದಂತೆ 48 ಆರೋಪಿಗಳು
• ಬಂಧಿತರಿಂದ 40 ಲಕ್ಷ ರೂ. ಮೌಲ್ಯದ 2 ಕಾರು, 17 ಮೊಬೈಲ್ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ
• ಇವರು ಸಿಕ್ಕಿಬಿದ್ದಿದ್ದು ಹೇಗೆ?: ಜಲಸಂಪನ್ಮೂಲ ಇಲಾಖೆ ನೇಮಕಾತಿ ವಿಭಾಗದ ಅಧಿಕಾರಿಗಳು, ಅರ್ಜಿ ಪರಿಶೀಲನೆ ನಡೆಸುವಾಗ ಅಂಕಪಟ್ಟಿಗಳನ್ನು ಸಂಬಂಧಪಟ್ಟ ಎಸ್ಎಸ್ಎಲ್ಸಿ ಮತ್ತು ಪಿಯು ಬೋರ್ಡ್ಗಳಿಗೆ ಸಿಂಧುತ್ವ ಪರಿಶೀಲನೆಗೆ ಕಳುಹಿಸಿದ್ದರು. 62 ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿಗಳು ನಕಲಿ ಎಂದು ವರದಿ ಬಂದಿತ್ತು. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಕೈಗೊಂಡ ವಿಶೇಷ ವಿಚಾರಣಾ ದಳದ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡ ಹಾಸನ ಜಿಲ್ಲೆಯಲ್ಲಿ 12 ಅಭ್ಯರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಇದೇ ರೀತಿಯಾಗಿ ಕಲುಬುರಗಿ-25, ವಿಜಯಪುರ-8, ಬೀದರ್-6, ಬೆಳಗಾವಿ-3, ಯಾದಗಿರಿ-2 ಮತ್ತು ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರದಲ್ಲಿ ತಲಾ ಓರ್ವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಬ್ಬರಿಗೊಬ್ಬರು ಪರಿಚಯವೇ ಇಲ್ಲ!: ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಸೃಷ್ಟಿಸುವಲ್ಲಿ ಮೂರು ಗ್ಯಾಂಗ್ಗಳು ಕೆಲಸ ಮಾಡಿವೆ. ಓರ್ವ ತಾನೇ ಕಂಪ್ಯೂಟರ್ನಲ್ಲಿ ಅಂಕಪಟ್ಟಿಗಳ ಫಾರ್ವಟ್ ಇಟ್ಟುಕೊಂಡು ಕೇವಲ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಬದಲಾಯಿಸಿ ಕೊಡುತ್ತಿದ್ದ. ಮತ್ತೊಬ್ಬ ಪಶ್ಚಿಮ ಬಂಗಾಳದಿಂದ, ಮತ್ತೊಬ್ಬ ಹರಿಯಾಣದಿಂದ ದ್ವಿತೀಯ ಪಿಯು, 12ನೇ ತರಗತಿ ಸಿಬಿಎಸ್ಸಿ, ದ್ವಿತೀಯ ಪಿಯುಸಿಯ ತತ್ಸಮಾನವಾದ ಎನ್ಐಓಎಸ್ ಅಂಕಪಟ್ಟಿ ತರಿಸಿಕೊಳ್ಳುತ್ತಿದ್ದರು. ನೌಕರಿ ಬಗ್ಗೆ ಜ್ಞಾನವೇ ಇಲ್ಲದವರು ಮತ್ತು ಪಿಯುಸಿ ಪಾಸ್ ಆಗಿ ಕಡಿಮೆ ಅಂಕ ಪಡೆದವರು ಈ ದಂಧೆಯಲ್ಲಿ ತೊಡಗಿದ್ದಾರೆ. ಪಿಯು ಪಾಸ್ ಆಗದಿದ್ದರೆ ಅಂಥವರಿಂದ 2 ಲಕ್ಷ ರೂ. ಪಡೆದು ಅಂಕಪಟ್ಟಿ ಕೊಟ್ಟು ಅರ್ಜಿ ಸಲ್ಲಿಸಿದ್ದರು. ಪಾಸ್ ಆಗಿ ಅಂಕ ಕಡಿಮೆ ಇದ್ದವರಿಂದ 1 ರಿಂದ ಒಂದೂವರೆ ಲಕ್ಷ ರೂ. ಪಡೆದು ಅಂಕಪಟ್ಟಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ದಂಧೆ ಹೇಗೆ?: ಏಜೆಂಟ್ಗಳು ಮತ್ತು ಮೂವರು ಸರ್ಕಾರಿ ನೌಕರರು ಎಸ್ಸಿ/ಎಸ್ಟಿ ಕೋಟಾದಡಿ ಉದ್ಯೋಗ ಆಕಾಂಕ್ಷಿಗಳಿಗೆ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ಕೆಲವರು ಪಿಯುಸಿ ಪಾಸ್ ಆಗಿದ್ದರೆ ಇನ್ನೂ ಕೆಲವರು ಕಡಿಮೆ ಅಂಕ ಪಡೆದಿ ದ್ದರು. ಅಂತಹ ಅಭ್ಯರ್ಥಿಗಳಿಂದ 1 ರಿಂದ 2 ಲಕ್ಷ ರೂ.ವರೆಗೆ ಹಣ ಪಡೆದು ನಕಲಿ ಅಂಕಪಟ್ಟಿ ಸೃಷ್ಟಿಸಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಏಜೆಂಟ್ಗಳು ಸರ್ಕಾರಿ ನೌಕರರನ್ನು ತೋರಿಸಿ ಆಮಿಷ: ಬಹುತೇಕ ಅಭ್ಯರ್ಥಿಗಳಿಗೆ ಇಂತಹದೊಂದು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು ಮತ್ತು ನೌಕರಿ ಸಿಗುತ್ತದೆ ಎಂಬ ಜ್ಞಾನವೇ ಇಲ್ಲ. ಅಂತಹವರಿಗೆ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಏಜೆಂಟ್ಗಳು ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ಹಣ ಪಡೆದು ಅರ್ಜಿ ಸಲ್ಲಿಸಿದ್ದರು. ಪೊಲೀಸರು ಹೋಗಿ ಬಂಧಿಸುವವರೆಗೂ ಅವರಿಗೆ ವಂಚನೆ ಮಾಡಿರುವ ಅರಿವೇ ಇರಲಿಲ್ಲ. ಮತ್ತೊಂದೆಡೆ ಬಂಧನಕ್ಕೆ ಒಳಗಾಗಿರುವ ಸರ್ಕಾರಿ ನೌಕರರಿಗೂ ಈ ಕೆಲಸಗಳನ್ನು ಅಭ್ಯರ್ಥಿಗಳಿಗೆ ಕೊಡಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿತ್ತು. ಅಮಾಯಕರಿಂದ ಹಣ ಸುಲಿಗೆ ಮಾಡುವ ಉದ್ದೇಶಕ್ಕೆ ನಕಲಿ ಅಂಕಪಟ್ಟಿ ಸೃಷ್ಟಿಸಿ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಸುಮ್ಮನಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
comments
Log in to write reviews