ರಾಜ್ಯದಲ್ಲಿ 100 ರೂ. ಆಸುಪಾಸಿನಲ್ಲಿ ಈರುಳ್ಳಿ ಬೆಲೆ!
2024-11-09 01:32:04
ಬೆಂಗಳೂರು, ನ.9: ದಿನದಿಂದ ದಿನಕ್ಕೆ ಜನಸಾಮಾನ್ಯರ ಬದುಕು ದುಬಾರಿಯಾಗುತ್ತಿದೆ. ಏಕೆಂದರೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದ್ದು ಬಡವರು, ಮಧ್ಯಮವರ್ಗದವರು ಜೀವನ ನಡೆಸುವುದು ಕಷ್ಟವಾಗಿ ಹೋಗಿದೆ. ಈ ಮಧ್ಯೆ,ಅಡುಗೆಗೆ ಅತ್ಯಗತ್ಯವಾದ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದ್ದು ಗ್ರಾಹಕರಿಗೆ ಕಣ್ಣೀರು ಸುರಿಸುತ್ತಿದೆ. ಸದ್ಯ ರಾಜ್ಯದಲ್ಲಿ ಹಿಂಗಾರು ಮಳೆ ತಗ್ಗಿದೆ. ಆದರೂ ಕಳೆದ ತಿಂಗಳು ಬಂದಂತಹ ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ನೀರುಪಾಲಾಗಿದ್ದು, ಮಳೆಯಿಂದ ರಕ್ಷಿಸಿದ ಈರುಳ್ಳಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹೀಗಾಗಿ ದರ ಏರಿಕೆಯಾಗಿದೆ. ಕೆಜಿಗೆ 50 ರೂ. ಇದ್ದ ಈರುಳ್ಳಿಯ ಬೆಲೆ ಇದೀಗ 60 ರಿಂದ 80 ರೂ.ವರೆಗೆ ಏರಿಕೆಯಾಗಿದೆ.
ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು?
ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹೊಳಲ್ಕೆರೆ, ಚಿತ್ರದುರ್ಗ ಮುಂತಾದ ಕಡೆ ಸತತ ಮಳೆ ಮತ್ತು ರೋಗ ಬಾಧೆಯಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಜೊತೆಗೆ ಕಳೆದ 3 ತಿಂಗಳಿನಿಂದ ಈರುಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇದೆ. ಮಳೆ ಇಲ್ಲದಿದ್ದರೂ ಬೆಲೆ 70 ರ ಗಡಿ ದಾಟಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಯ ಪರಿಣಾಮ ನಿರೀಕ್ಷೆಯಷ್ಟು ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಬಂದಂತಹ ಅಲ್ಪಸ್ವಲ್ಪ ಈರುಳ್ಳಿಯ ಗುಣಮಟ್ಟವೂ ಚೆನ್ನಾಗಿಲ್ಲ. ಹೀಗಾಗಿ ಸದ್ಯ ಈರುಳ್ಳಿಯನ್ನು ಮಹಾರಾಷ್ಟದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಮಹಾರಾಷ್ಟ್ರದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
ಹೆಚ್ಚಿದ ಈರುಳ್ಳಿ ಬೇಡಿಕೆ
ಒಂದೆಡೆ ಪೂರೈಕೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಬೇಡಿಕೆಯೂ ತಲೆನೋವಾಗಿ ಹೆಚ್ಚಿದೆ. ಪರಿಣಾಮವಾಗಿ ಬೆಲೆ ಏರಿಕೆಯಾಗುತ್ತಿದೆ. ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ದುಬಾರಿಯಾಯ್ತು ಈರುಳ್ಳಿ ಬೆಲೆ!
ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿಗೆ 70 ರಿಂದ 80 ರೂ. ಇದ್ದರೆ, ಸಣ್ಣಪುಟ್ಟ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟ ದರ 90 ರೂ. ಆಗಿದೆ. ಮುಂದಿನ ದಿನಗಳಲ್ಲಿ 100 ರೂ. ಗಡಿದಾಟುವ ಸಾಧ್ಯತೆಗಳಿವೆ.
ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) 1,00,480 ಚೀಲ ಈರುಳ್ಳಿ ಬಂದಿದ್ದು, ಈ ಪೈಕಿ ಮಹಾರಾಷ್ಟ್ರದಿಂದ 8ರಿಂದ 10 ಲಾರಿ ಉತ್ತಮ ಗುಣಮಟ್ಟದ ಹಳೆಯ ದಾಸ್ತಾನು ಈರುಳ್ಳಿ ಬಂದಿದೆ. ಈ ಉನ್ನತ ದರ್ಜೆಯ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 7,200 ರಿಂದ 7,500 ರೂ.ಗಳ ದರದಲ್ಲಿ ಮಾರಾಟವಾಗುತ್ತಿದೆ. ಕಡಿಮೆ ಗುಣಮಟ್ಟದ ಸ್ಥಳೀಯ ಈರುಳ್ಳಿ ಕ್ವಿಂಟಾಲ್‌ಗೆ 5,500 ರಿಂದ 5,500 ರೂ. ವರೆಗೆ ಮಾರಾಟವಾಗುತ್ತಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
comments
Log in to write reviews